Monday, March 11, 2019

ಹೇಳಿಕೆ ಅನಗತ್ಯ, ಮುಸ್ಲಿಮರನ್ನು ಬಳಕೆ ಮಾಡಿಕೊಳ್ಳುವುದನ್ನು ನಿಲ್ಲಿಸಿ: ಟಿಎಂ ಸಿಗೆ ಒವೈಸಿ

ಜನಜಾಗೃತಿ ಸುದ್ಧಿವಾಹಿನಿ
ರಂಜಾನ್ ವೇಳೆ ಮತದಾನ, '
ಹೈದರಾಬಾದ್: ಇತ್ತೀಚಿನ ದಿನಗಳಲ್ಲಿ ತಮ್ಮ ಹೇಳಿಕೆಗಳಿಂದ ಅಚ್ಚರಿ ಉಂಟುಮಾಡುತ್ತಿರುವ ಎಂಐಎಂ ಪಕ್ಷದ ಮುಖ್ಯಸ್ಥ ಈಗ ರಂಜಾನ್ ವೇಳೆ ಲೋಕಸಭಾ ಚುನಾವಣೆ ವಿವಾದವನ್ನು ಅನಗತ್ಯ ಎಂದಿದ್ದಾರೆ.

ಉತ್ತರ ಪ್ರದೆಶ, ಪಶ್ಚಿಮ ಬಂಗಾಳ, ಬಿಹಾರ್ ರಾಜ್ಯಗಳಲ್ಲಿ ರಂಜಾನ್ ವೇಳೆಯೇ ಲೋಕಸಭೆಗೆ ಮತದಾನ ನಡೆಯಲಿದೆ ಇದರಿಂದ ಅಲ್ಪಸಂಖ್ಯಾತರಿಗೆ ಮತದಾನ ಮಾಡುವುದಕ್ಕೆ ಅಡ್ಡಿ ಉಂಟಾಗಲಿದೆ ಎಂದು ಕೋಲ್ಕತ್ತಾ ಮೇಯರ್ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಒವೈಸಿ ಪ್ರತಿಕ್ರಿಯೆ ನೀಡಿದ್ದು, ಇಡೀ ವಿವಾದ ಅನಗತ್ಯವಾದದ್ದು, ನಿಮ್ಮ ಕಾರಣಗಳಿಗಾಗಿ ಮುಸ್ಲಿಂ ಸಮುದಾಯ ಹಾಗೂ ರಂಜಾನ್ ನ್ನು ಎಳೆದು ತರಬೇಡಿ ಎಂದು ಆ ರಾಜಕೀಯ ಪಕ್ಷಗಳಿಗೆ (ತೃಣಮೂಲ ಕಾಂಗ್ರೆಸ್) ಗೆ ಮನವಿ ಮಾಡುತ್ತೆನೆ ಎಂದು ಹೇಳಿದ್ದಾರೆ.
ರಂಜಾನ್ ವೇಳೆ ಮುಸ್ಲಿಮರು ಉಪವಾಸ ಮಾಡುತ್ತಾರೆ, ಹೊರಗೆ ಓಡಾಡುತ್ತಾರೆ, ಕಚೇರಿಗೆ ಹೋಗುತ್ತಾರೆ. ಸಹಜ ಜೀವನ ನಡೆಸುತ್ತಾರೆ, ಅತಿ ಬಡವರೂ ಸಹ ರಂಜಾನ್ ಉಪವಾಸ ಮಾಡುತ್ತಾರೆ. ರಂಜಾನ್ ವೇಳೆ ವಾಸ್ತವವಾಗಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರು ಮತದಾನ ಮಾಡುತ್ತಾರೆ, ಏಕೆಂದರೆ ಅವರೆಲ್ಲಾ ಪ್ರಾಪಂಚಿಕ ಕರ್ತವ್ಯಗಳಿಂದ ಒಂದಷ್ಟು ಬಿಡುವು ಹೊಂದಿರುತ್ತಾರೆ ಎಂದು ಒವೈಸಿ ಹೇಳಿದ್ದಾರೆ.
ನಮ್ಮ ಸುದ್ಧಿ ವೀಕ್ಷಿಸಲು ಲಿಂಕ್ ಬಳಸಿ https://youtu.be/AFrRSRKwwtY

Sunday, March 10, 2019

ಮಲ್ಲಿಕಾರ್ಜುನ ಖರ್ಗೆ ದೇಶಧ ಎರಡನೇ ಅಂಬೇಡ್ಕರ್ : ರಾಜಶೇಖರ್ ಪಾಟೀಲ್

ಜನಜಾಗೃತಿ ಸುದ್ಧಿವಾಹಿನಿ
ಯಾದಗಿರಿ: ಕಾಂಗ್ರೆಸ್ ನ ಹಿರಿಯ ನಾಯಕ, ಸಂಸದ ಮಲ್ಲಿಕಾರ್ಜುನ ಖರ್ಗೆ ಅವರು ದೇಶದ ಎರಡನೇ ಅಂಬೇಡ್ಕರ್, ಲೋಕಸಭೆ ಚುನಾವಣೆಯಲ್ಲಿ ಅವರನ್ನು ಮತ್ತೊಮ್ಮೆ ಗೆಲ್ಲಿಸುವ ಮೂಲಕ ದೇಶ ಸೇವೆಗೆ ಅವಕಾಶ ಮಾಡಿಕೊಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಜಶೇಖರ್ ಪಾಟೀಲ್ ಹೇಳಿದರು.

ಗುರುಮಠಕಲ್ ನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಅವರು 8 ಬಾರಿ ಶಾಸಕರಾಗಿ, 2 ಬಾರಿ ಲೋಕಸಭೆ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ಹೀಗಾಗಿ ಮತದಾರರು ಇವರಿಗೆ ಅವರನ್ನು ಗೆಲ್ಲಿಸಬೇಕು. ಪ್ರಧಾನಿ ಮೋದಿ ಅವರನ್ನು ಸಮರ್ಥವಾಗಿ ಎದುರಿಸುವ ಶಕ್ತಿ ಖರ್ಗೆ ಅವರಿಗೆ ಮಾತ್ರ ಇದೆ ಎಂದರು.

ಬಳಿಕ ಮಾತನಾಡಿದ ಕೆಪಿಸಿಸಿ ಕಾರ್ಯದರ್ಶಿ ಈಶ್ವರ್ ಖಂಡ್ರೆ, ಪ್ರಧಾನಿ ಮೋದಿ ಅವರು ಬರೀ ಹುಸಿ ಭರವಸೆಗಳನ್ನು ನೀಡಿ ಜನರಿಗೆ ಮೋಸ ಮಾಡಿದ್ದಾರೆ.

ಕಳೆದ ಐದು ವರ್ಷಗಳಲ್ಲಿ ಆಡಳಿತ ನಡೆಸಿದರೂ ಸಹ ದೇಶಕ್ಕೆ ಏನೂ ಕೊಡುಗೆ ನೀಡಿಲ್ಲ ಎಂದು ಆರೋಪಿಸಿದರು.
ನಮ್ಮ ಸುದ್ಧಿ ವೀಕ್ಷಿಸಲು ಲಿಂಕ್ ಬಳಸಿ https://youtu.be/AFrRSRKwwtY

Saturday, March 9, 2019

ಸುಮಲತಾ ವಿರುದ್ದ ರೇವಣ್ಣ ಹೇಳಿಕೆ; ಕ್ಷಮೆ ಕೇಳಿದ ಸಿಎಂ ಕುಮಾರಸ್ವಾಮಿ!🙏🏻

ಜನಜಾಗೃತಿ ಸುದ್ಧಿವಾಹಿನಿ 


ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆ ವಿಚಾರವಾಗಿ ನಟಿ ಸುಮಲತಾ ಅಂಬರೀಶ್ ವಿರುದ್ಧ ಸಚಿವ ರೇವಣ್ಣ ನೀಡಿದ್ದ ಹೇಳಿಕೆ ವಿಚಾರವಾಗಿ ಸಿಎಂ ಕುಮಾರಸ್ವಾಮಿ ಕ್ಷಮೆ ಯಾಚಿಸಿದ್ದಾರೆ.

ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಪಲ್ಸ್ ಪೋಲಿಯೋ ಲಸಿಕೆ ಅಭಿಯಾನ ಕಾರ್ಯಕ್ರಮಕ್ಕೆ ಸಿಎಂ ಕುಮಾರಸ್ವಾಮಿ ಅವರು ಪುಟಾಣಿ ಮಕ್ಕಳಿಗೆ ಲಸಿಕೆ ಹಾಕೋ ಮೂಲಕ ಚಾಲನೆ ನೀಡಿದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರೇವಣ್ಣ ಅವರು ಸುಮಲತಾ ಅವರ ವಿರುದ್ಧ ಮಾತನಾಡಿಲ್ಲ. ಅವರನ್ನು ಟೀಕಿಸಿಲ್ಲ. ರೇವಣ್ಣ ಬಳಿ ನಾನು ಈ ಬಗ್ಗೆ ಮಾತನಾಡಿ, ಯಾಕೆ ಈ ಹೇಳಿಕೆ ನೀಡಿದಿರಿ ಅಂತ ಕೇಳಿದ್ದೇನೆ. ಸುಮಲತಾ ಅವರು ಅಂಬರೀಶ್ ಅವರು ಅಗಲಿರುವ ನೋವಿನಲ್ಲಿದ್ದಾರೆ. ಈ ನಡುವೆ ರಾಜಕೀಯ ಬೇಡವಾಗಿತ್ತು ಎನ್ನುವ ದೃಷ್ಟಿಯಲ್ಲಿ ನಾನು ಹೇಳಿದ್ದು ಅಷ್ಟೆ ಎಂದು ಹೇಳಿದ್ದಾರೆ.

ಆದರೂ ಅವರು ಅವರು ಈ ರೀತಿ ಹೇಳಿಕೆ ನೀಡಬಾರದಿತ್ತು. ರೇವಣ್ಣ ಅವರ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ನಾನು ಅವರ ಪರವಾಗಿ ಕ್ಷಮೆ ಕೇಳುತ್ತೇನೆ. ನಮ್ಮದು ಮಹಿಳೆಯರಿಗೆ ಗೌರವ ಕೊಡುವ ಕುಟುಂಬ. ಯಾವ ಹೆಣ್ಣು ಮಕ್ಕಳಿಗೂ ನಾವು ಅವಮಾನ ಮಾಡಿಲ್ಲ ಎಂದು ಎಂದು ಕುಮಾರಸ್ವಾಮಿ ಹೇಳಿದರು. 

ರೇವಣ್ಣ ಅವರು ಸುಮಲತಾ ಅವರಿಗೆ ರಾಜಕೀಯ ಯಾಕೆ ಬೇಕಿತ್ತು ಅಂತ ಹೇಳಿಕೆಗೆ ಅಂಬಿ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ ಬಿಜೆಪಿ ನಾಯಕರು ಕೂಡ ರೇವಣ್ಣ ಹೇಳಿಕೆಯನ್ನು ಖಂಡಿಸಿದ್ದರು. ಸಾಮಾಜಿಕ ಜಾಲತಾಣಗಳ ಮೂಲಕ ಬಹುತೇಕ ಜನರು ಸುಮಲತಾ ಅವರಿಗೆ ಬೆಂಬಲ ವ್ಯಕ್ತಪಡಿಸಿ, ದೇವೇಗೌಡರು ಕುಟುಂಬ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಗಳನ್ನೂ ಕೂಡ ಮಾಡುತ್ತಿದ್ದಾರೆ.


ನಿನ್ನೆಯಷ್ಟೇ ಇದೇ ವಿಚಾರವಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ವಿಶ್ವನಾಥ್ ಅವರೂ ಕೂಡ ರೇವಣ್ಣ ಪರವಾಗಿ ಕ್ಷಮೆ ಯಾಚಿಸಿ ಇಡೀ ಪ್ರಹಸನಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದರು.

ನಮ್ಮ ಸುದ್ಧಿ ವೀಕ್ಷಿಸಲು ಲಿಂಕ್ ಬಳಸಿ https://youtu.be/AFrRSRKwwtY

ಲೋಕಸಭೆ ಚುನಾವಣೆ ಹೊತ್ತಲ್ಲೇ ಕಾಂಗ್ರೆಸ್ ಗೆ ಮತ್ತೊಂದು ಶಾಕ್

ಕಲಬುರಗಿ: ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ರಾಜಕೀಯದಲ್ಲಿ ಅನೇಕ ಬೆಳವಣಿಗೆ ನಡೆಯತೊಡಗಿವೆ.


ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಸ್ಪರ್ಧಿಸಲು ಕಾಂಗ್ರೆಸ್ ಶಾಸಕ ಡಾ. ಉಮೇಶ್ ಜಾಧವ್ ರಾಜೀನಾಮೆ ನೀಡಿ, ಬಿಜೆಪಿ ಪಾಳಯ ಸೇರಿಕೊಂಡಿದ್ದಾರೆ.


ಅವರು ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಸ್ಪರ್ಧಿಸುವುದು ಪಕ್ಕಾ ಆಗಿದೆ. ಇದೇ ವೇಳೆ ಕಲಬುರಗಿಯ ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಸಚಿವ ವೈಜನಾಥ ಪಾಟೀಲ್ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.


ಹೈದರಾಬಾದ್ - ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷರಾಗಿರುವ ವೈಜನಾಥ ಪಾಟೀಲ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ರವಾನಿಸಿದ್ದಾರೆ. ಹೈದರಾಬಾದ್ - ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅನುದಾನ ಪೂರ್ಣವಾಗಿ ಖರ್ಚಾಗುತ್ತಿಲ್ಲ.


ಅಲ್ಲದೇ, 371ಜೆ ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿಲ್ಲ. ಈ ಭಾಗದ ಖಾಲಿ ಹುದ್ದೆಗಳನ್ನು ಭರ್ತಿ ಮಾಡುತ್ತಿಲ್ಲ ಎಂದು ಅವರು ದೂರಿದ್ದಾರೆ. ಅವರು ಈ ಬೆಳವಣಿಗೆಗಳಿಂದ ರಾಜೀನಾಮೆ ನೀಡುತ್ತಿರುವುದಾಗಿ ಹೇಳಿದ್ದಾರೆ. ವೈಜನಾಥ ಪಾಟೀಲ್ ಬಿಜೆಪಿ ಸೇರ್ಪಡೆಯಾಗಿ ಲೋಕಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಬಿಜೆಪಿಯನ್ನು ಬೆಂಬಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ನಮ್ಮ ಸುದ್ಧಿ ವೀಕ್ಷಿಸಲು ಲಿಂಕ್ ಬಳಸಿ https://youtu.be/AFrRSRKwwtY 

Thursday, March 7, 2019

ಮೋದಿಯಂತಹ ನೂರು ಮಂದಿ ಬಂದರೂ ನನ್ನನ್ನು ಅಲುಗಾಡಿಸಲು ಸಾಧ್ಯವಿಲ್ಲ: ಮಲ್ಲಿಕಾರ್ಜುನ ಖರ್ಗೆ

ಜನಜಾಗೃತಿ ಸುದ್ಧಿವಾಹಿನಿ

ಕಲಬುರಗಿ, ಮಾ.7: ಕಲಬುರಗಿ ಕ್ಷೇತ್ರದಲ್ಲಿ ನನ್ನ ಅಭಿವೃದ್ಧಿ ಕಾಮಗಾರಿಗಳ ಬಗ್ಗೆಯಷ್ಟೇ ಮಾತನಾಡಲು ಸಾಧ್ಯ. ಹೀಗಾಗಿ ನನ್ನ ಕುರಿತು ಪ್ರಧಾನಿ ನರೇಂದ್ರ ಮೋದಿ ಏನೂ ಮಾತನಾಡದೆ ಹಿಂದಿರುಗಿದ್ದಾರೆ ಎಂದು ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.


ಗುರುವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಬಗ್ಗೆ ಸುಳ್ಳು ಮಾತನಾಡಿದರೆ ಇಲ್ಲಿನ ಜನರು ತಿರುಗೇಟು ನೀಡುತ್ತಾರೆಂಬುದು ಮೋದಿಗೆ ಗೊತ್ತಿದೆ. ಖರ್ಗೆ ಎಂದ ಕೂಡಲೇ ಅಭಿವೃದ್ದಿ ಜನರ ಕಣ್ಣ ಮುಂದೆ ಬರುತ್ತದೆ. ಹೀಗಾಗಿ ಅವರು ನನ್ನ ಬಗ್ಗೆ ಏನೂ ಮಾತನಾಡಿಲ್ಲ. ಇದು ಚುನಾವಣಾ ತಂತ್ರಗಾರಿಕೆ ಭಾಗವೇ ಆಗಿದೆ ಎಂದು ಹೇಳಿದರು.


ಪ್ರಧಾನಿ ಮೋದಿ ಕಲಬುರಗಿಗೆ ಬರುತ್ತಿದ್ದು, ಕಲ್ಲಿನ ನಾಡನ್ನು ಚಿನ್ನದ ನಾಡನ್ನಾಗಿ ಮಾಡಿಬಿಡುತ್ತಾರೆಂಬ ಭಾವಿಸಿದ್ದೆ. ಆದರೆ, ಬಂದ ದಾರಿಗೆ ಸುಂಕವಿಲ್ಲ ಎಂಬ ಮಾತಿನಂತೆ ಹೀಗೆ ಬಂದು ಹಾಗೇ ಹೋಗಿದ್ದಾರೆ. ಈ ಕರ್ಮಕ್ಕೆ ಅವರು ದಿಲ್ಲಿಯಿಂದ ಇಲ್ಲಿಗೆ ಬರಬೇಕಿತ್ತೇ ಎಂದು ಪ್ರಶ್ನಿಸಿದ ಅವರು, 5 ವರ್ಷಗಳಲ್ಲಿ ಮೋದಿ ಈ ಜಿಲ್ಲೆಗೆ ಮಾಡಿದ ಒಂದೇ ಒಂದೂ ಕೆಲಸವನ್ನಾದರೂ ಬಾಯಿ ಬಿಟ್ಟು ಹೇಳಬೇಕಿತ್ತು. ಆದರೆ, ಅವರು ಏಕೆ ಹೇಳಲಿಲ್ಲ ಎಂದು ಟೀಕಿಸಿದರು.


ರೈಲ್ವೆ ವಿಭಾಗೀಯ ಕಚೇರಿ, ಹೊರ ವರ್ತುಲ ರಸ್ತೆ, ವಿಮಾನ ನಿಲ್ದಾಣ ಸೇರಿದಂತೆ ಹಲವು ಕೆಲಸಗಳು ಬಾಕಿ ಉಳಿದಿವೆ. ನನ್ನ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದ ಹಲವು ಕಡತಗಳು ದೂಳು ಹಿಡಿದಿವೆ. ಅದೆಲ್ಲವನ್ನೂ ಬೆಂಗಳೂರು, ರಾಯಚೂರು ಹಾಗೂ ಹುಬ್ಬಳ್ಳಿಗೆ ಮಂಜೂರಾದ ಕಾಮಗಾರಿಗಳಿಗೆ ಕಲಬುರಗಿಯಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ ಎಂದು ಟೀಕಿಸಿದರು.

ನಮ್ಮ ಸುದ್ಧಿ ವೀಕ್ಷಿಸಲು ಲಿಂಕ್ ಬಳಸಿ https://youtu.be/uh1TYTbdX7Y

Tuesday, March 5, 2019

ಲೋಕಸಭಾ ಚುನಾವಣೆ ಹಿನ್ನಲೆ : ಖರ್ಗೆ ಕೋಟೆಗೆ ಇಂದು ಪ್ರಧಾನಿ ಮೋದಿ ಮುತ್ತಿಗೆ

ಜನಜಾಗೃತಿ ಸುದ್ಧಿವಾಹಿನಿ
ಕಲಬುರಗಿ: ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಅವರ ಪುತ್ರ ಪ್ರಿಯಾಂಕ್ ವಿರುದ್ಧ ಸಿಡಿದೆದ್ದು ಕೈ ತೊರೆದಿರುವ ಚಿಂಚೋಳಿ ಶಾಸಕ ಉಮೇಶ್ ಜಾಧವ್ ಬಿಜೆಪಿ ಸೇರ್ಪಡೆಗೆ ಇಂದು ಕಲಬುರಗಿಯಲ್ಲಿ ವೇದಿಕೆ ಸಜ್ಜಾಗಿದೆ.

ಈ ನಡುವೆ ಇಂದು ನಡೆಯಲಿರುವ ಸಮಾವೇಶದಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದು, ಉಮೇಶ್ ಜಾಧವ್ ಪ್ರಧಾನಿ ಸಮ್ಮುಖದಲ್ಲೇ ಬಿಜೆಪಿ ಸೇರಲಿದ್ದು, ಚುನಾವಣೆಯಲ್ಲಿ ಅವರನ್ನೇ ಖರ್ಗೆ ಎದುರು ಘೋಷಣೆ ಮಾಡಲಾಗುವುದು ಎನ್ನಲಾಗಿದೆ.
ಕಲಬುರಗಿ ಲೋಕಸಭೆ ಕ್ಷೇತ್ರದಲ್ಲಿ ಖರ್ಗೆ ವಿರುದ್ಧ ಹೆಪ್ಪುಗಟ್ಟಿರುವ ವಿರೋಧಿ ಅಲೆಗಳನ್ನು ಒಟ್ಟುಗೂಡಿಸಿ ಬಿಜೆಪಿ ಹೋರಾಟಕ್ಕಿಳಿದಿದೆ. ಈ ಬಾರಿ ಹೇಗಾದರೂ ಮಾಡಿ ಕಲಬುರಗಿಯನ್ನು ತೆಕ್ಕೆಗೆ ತೆಗೆದುಕೊಳ್ಳಬೇಕೆಂದು ಹೊರಟಿರುವ ಬಿಜೆಪಿಗೆ ಕಾಂಗ್ರೆಸ್​ನ ಅತೃಪ್ತರೆಲ್ಲ ಬೆಂಬಲಕ್ಕೆ ನಿಂತಿರುವುದು ವಿಶೇಷ. ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಕ್ಷೇತ್ರದಿಂದಲೇ ಮೋದಿ ರಾಜ್ಯ ಪ್ರವಾಸ ಆರಂಭಿಸುತ್ತಿರುವುದು ಇನ್ನೊಂದು ವಿಶೇಷವಾಗಿದೆ.
ನಮ್ಮ ಸುದ್ಧಿ ವೀಕ್ಷಿಸಲು ಲಿಂಕ್ ಬಳಸಿ https://youtu.be/zAAS6y1zJgs

ಸಚಿವ ಡಿ.ಕೆ. ಶಿವಕುಮಾರ್ ಗೆ ಮತ್ತೆ ಶಾಕ್ : ತಾಯಿ ಗೌರಮ್ಮರಿಗೆ ಐಟಿಯಿಂದ ನೋಟಿಸ್!

ಜನಜಾಗೃತಿ ಸುದ್ಧಿವಾಹಿನಿ
ಬೆಂಗಳೂರು: ಸಚಿವ ಡಿ.ಕೆ. ಶಿವಕುಮಾರ್ ಗೆ ಬೇನಾಮಿ ಆಸ್ತಿ ಆರೋಪ ಪ್ರಕರಣದಲ್ಲಿ ಮತ್ತೆ ಐಟಿ ಶಾಕ್ ನೀಡಿದ್ದು, ತಾಯಿ ಗೌರಮ್ಮ ಅವರಿಗೆ ಮತ್ತೆ ನೋಟಿಸ್ ನೀಡಿದೆ.
ಇತ್ತೀಚೆಗಷ್ಟೇ ನೋಟಿಸ್ ನೀಡಿದ್ದ ಐಟಿ ಅಧಿಕಾರಿಗಳು ಮಾ. 6 ರೊಳಗೆ ವಿವರಣೆ ನೀಡುವಂತೆ ಸೂಚನೆ ನೀಡಿದ್ದರು.
 ಸೂಕ್ತ ವಿವರಣೆ ನೀಡದಿದ್ದರೆ ಬೇನಾಮಿ ಆಸ್ತಿ ಜಪ್ತಿ ಮಾಡುವುದಾಗಿ ಹೇಳಿದ್ದರು. ವಿಧಾನಸಭೆ ಚುನಾವಣೆಯಲ್ಲಿ ಸುಳ್ಳು ದಾಖಲೆ ಸಲ್ಲಿಕೆ ಆರೋಪವಾಗಿ ಈಗಾಗಲೇ ಚುನಾವಣೆ ಆಯೋಗಕ್ಕೆ ಆದಾಯ ತೆರಿಗೆ ಅಧಿಕಾರಿಗಳು ದೂರು ನೀಡಿದ್ದಾರೆ.ಬೇನಾಮಿ ಆಸ್ತಿ ಆರೋಪ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್ ಪತ್ನಿ ಉಷಾ ಹಾಗೂ ಪುತ್ರಿ ಐಶ್ವರ್ಯ, ಸಹೋದರ ಡಿ.ಕೆ. ಸುರೇಶ್ ಗೆ ಸಾಕಷ್ಟು ನೀಡಿದ್ದಾರೆ.
ನಮ್ಮ ಸುದ್ಧಿ ವೀಕ್ಷಿಸಲು ಲಿಂಕ್ ಬಳಸಿ https://youtu.be/zAAS6y1zJgs

Sunday, March 3, 2019

ಹೃದಯಾಘಾತ ಬರುವ ಮುನ್ನ ನಮ್ಮ ದೇಹದಲ್ಲಿ ಈ ತರಹದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆಯಂತೆ!

ಜನಜಾಗೃತಿ ಸುದ್ಧಿವಾಹಿನಿ
ಮನುಷ್ಯನ ದೇಹದ ಮುಖ್ಯವಾದ ಅಂಗಗಳಲ್ಲಿ ಹೃದಯವು ಸಹ ಒಂದು. ಹೃದಯವೂ ನಿರಂತರವಾಗಿ ಸಕ್ರಿಯವಾದದ್ದು, ರಕ್ತ ಶುದ್ಧಿಗೊಳಿಸುತ್ತಾ, ಅದು ದೇಹದ ಎಲ್ಲಾ ಅಂಗಾಂಗಗಳಿಗೂ ರಕ್ತ ತಲುಪುವಂತೆ ಮಾಡುತ್ತದೆ. ಪ್ರಸ್ತುತ ಆರೋಗ್ಯಕರ ಆಹಾರ ಪದ್ಧತಿ, ನಮ್ಮ ಸುತ್ತಮುತ್ತಲಿರುವ ಕಲುಷಿತ ಮಾಲಿನ್ಯ, ದುಶ್ಚಟಗಳ ಅಭ್ಯಾಸದಿಂದ ಹೃದಯದ ಮೇಲೆ ಒತ್ತಡ ಹೆಚ್ಚಾಗಿ ಹೃದಯಾಘಾತ ಸಂಭವಿಸುವ ಅವಕಾಶಗಳು ಇದೆ. ತೀವ್ರವಾದ ಹೃದಯಾಘಾತ ಉಂಟಾದರೆ ಪ್ರಾಣಕ್ಕೆ ಅಪಾಯ ಸಂಭವಿಸಬಹುದು.

 ಹೃದಯಾಘಾತ ಸಂಭವಿಸುವವರಿಗೆ ಹೃದಯದ ಸಮಸ್ಯೆ ಬರಬಹುದೆಂಬ ಆಲೋಚನೆಯು ಸಹ ಇರುವುದಿಲ್ಲ. ಹೃದಯಾಘಾತ ಬರುವ ಮುನ್ನ ಕೆಲ ಲಕ್ಷಣಗಳು ನಮಗೆ ತಿಳಿಯುತ್ತವೆ. ಇದನ್ನು ತುಂಬಾ ಜನರು ಗಮನಿಸುವುದೇ ಇಲ್ಲ, ಈ ಲಕ್ಷಣಗಳನ್ನು ಗುರುತಿಸಿದರೆ ಮುನ್ನೆಚ್ಚರಿಕೆ ಕ್ರಮಗಳಿಂದ ಹೃದಯ್ಘಾತ ಸಂಭವಿಸದಂತೆ ನೋಡಿಕೊಳ್ಳಬಹುದು. ಆ ಲಕ್ಷಣಗಳ ಬಗ್ಗೆ ಈಗ ತಿಳಿಯೋಣ ಬನ್ನಿ...

ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರಿಗೆ, ಸಕ್ಕರೆ ಖಾಯಿಲೆ ಇರುವವರಿಗೆ, ಅಧಿಕ ಕೊಲೆಸ್ಟ್ರಾಲ್ ಇದ್ದಾರೆ, ಯಾವುದೇ ರೀತಿಯ ದೈಹಿಕ ವ್ಯಾಯಾಮ ಮಾಡದೆ ಇರುವವರಿಗೆ, ಅಧಿಕ ತೂಕ ಇರುವವರಿಗೆ ಹೃದಯಾಘಾತ ಬರುವ ಸಾಧ್ಯತೆಗಳು ಹೆಚ್ಚು.

೧)ತಲೆಸುತ್ತು: ಕಾರಣವಿಲ್ಲದೆ ತಲೆಸುತ್ತು ಬರುತ್ತಿದ್ದರೆ ಹಾಗು ಯಾವಾಗಲು ತಲೆನೋವು ಕಾಡುತ್ತ ಇದ್ದಾರೆ, ಹೃದಯವು ಮೆದುಳಿಗೆ ಸರಿಯಾಗಿ ರಕ್ತವನ್ನು ಸಂಚಾರ ಮಾಡುತ್ತಿಲ್ಲವೆಂದರ್ಥ. ಇದು ಹೃದಯಾಘಾತದ ಒಂದು ಲಕ್ಷಣವಾಗಿರಬಹುದು.

೨) ಉಸಿರಾಟದಲ್ಲಿ ವೇಗ ಹೆಚ್ಚಾಗುವುದು: ಹೃದಯವು ಸರಿಯಾಗಿ ಕೆಲಸ ಮಾಡದೇ ಇದ್ದಾಗ ಶ್ವಾಸಕೋಶಕ್ಕೆ ಸರಿಯಾಗಿ ರಕ್ತಸಂಚಾರ ಆಗುವುದಿಲ್ಲ. ಇದರಿಂದ ಉಸಿರಾಟದಲ್ಲಿ ತೊಂದರೆಯಾಗುತ್ತದೆ. ತಂಪು ವಾತಾವರಣದಲ್ಲಿ ದೇಹ ಬೆವರುತ್ತಿದ್ದರೆ ಅದು ಹೃದಯಾಘಾತದ ಲಕ್ಷಣವಾಗಿರಬಹುದು.

೩) ಆಲಸ್ಯ: ಯಾವುದೇ ಕಾರಣವಿಲ್ಲದೆ ಸುಸ್ತು ಕಾಣಿಸಿಕೊಳ್ಳುತ್ತಿದ್ದರೆ ಅದು ಹೃದಯಾಘಾತದ ಲಕ್ಷಣವಾಗಿರಬಹುದು. ಇದು ಒಂದು ತಿಂಗಳ ಮೊದಲು ಕಾಣಿಸಿಕೊಳ್ಳುತ್ತದೆ. ಎದೆಭಾಗದಲ್ಲಿ ಬಿಗಿಹಿಡಿತ, ಒತ್ತಡ, ಉರಿಯುವಂತಾಗುವುದು ಇಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದರೆ ತಕ್ಷಣವೇ ವೈದ್ಯರನ್ನು ಭೇಟಿಯಾಗುವುದು ಒಳ್ಳೆಯದು.

ಈ ಲಕ್ಷಣ ಎಲ್ಲರಿಗು ಎದೆಯ ಎಡಭಾಗದಲ್ಲೇ ನೋವು ಕಾಣಿಸಿಕೊಳ್ಳಬೇಕೆಂದಿಲ್ಲ. ಇದು ಕೆಲವರಿಗೆ ಕತ್ತು, ಗಂಟಲು, ಹೊಟ್ಟೆಯ ಮೇಲ್ಭಾಗ, ಬೆನ್ನು, ತೋಳು, ಸೊಂಟ, ದವಡೆ, ಭುಜಗಳಲ್ಲಿ ನೋವು ಬರಬಹುದು. ಅನಿಯಮಿತ ಎದೆ ಬಡಿತವು ಸಹ ಹೃದಯಾಘಾತದ ಲಕ್ಷಣಗಳೇ ಆಗಿವೆ.

೪)ಊತ: ಹೃದಯವು ಅಸಹಜ ರೀತಿಯಲ್ಲಿ ರಕ್ತವನ್ನು ಹೊರಹಾಕುತ್ತಿದ್ದಾಗಹೊಟ್ಟೆ ಮತ್ತು ಕೈ ಕಾಲು ಭಾಗಗಳಲ್ಲಿ ಊತ ಕಾಣಿಸಿಕೊಳ್ಳುತ್ತದೆ. ಇದರಿಂದ ಹೊರಸೂಸುಗಳಲ್ಲಿ ಉರಿ ಕಾಣಿಸಿಕೊಳ್ಳಬಹುದು.

ಈ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ತಡಮಾಡದೆ ಚಿಕಿತ್ಸೆಯನ್ನು ತೆಗೆದುಕೊಂಡು ಹೃದಯ ಆರೋಗ್ಯವನ್ನು ಕಾಪಾಡಿಕೊಳ್ಳಿ..
ನಮ್ಮ ಸುದ್ಧಿ ವೀಕ್ಷಿಸಲು ಲಿಂಕ್ ಬಳಸಿ https://youtu.be/zAAS6y1zJgs

Saturday, March 2, 2019

ರಾಜ್ಯಾದ್ಯಂತ ಹಂದಿಜ್ವರ ದಿಢೀರ್‌ ಹೆಚ್ಚಳ; 14 ಮಂದಿ ಸಾವು

ಜನಜಾಗೃತಿ ಸುದ್ಧಿವಾಹಿನಿ

ಬೆಂಗಳೂರು: ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ ಮಾರಣಾಂತಿಕ ಎಚ್‌1ಎನ್‌1 (ಹಂದಿ ಜ್ವರ) ಪ್ರಕರಣಗಳು ತೀವ್ರಗೊಳ್ಳುತ್ತಿದ್ದು, ಎರಡೇ ತಿಂಗಳಲ್ಲಿ 607 ಪ್ರಕರಣಗಳು ದೃಢಪಟ್ಟಿವೆ. ಇದರಲ್ಲಿ 14 ಮಂದಿ ಮೃತಪಟ್ಟಿದ್ದು, ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.


ಕಳೆದ ಇಡೀ ವರ್ಷ 1733 ಪ್ರಕರಣಗಳು ಮಾತ್ರ ದೃಢಪಟ್ಟಿದ್ದವು. ಈ ಪೈಕಿ 72 ಮಂದಿ ಮೃತಪಟ್ಟಿದ್ದು, ಪ್ರಸಕ್ತ ಸಾಲಿನಲ್ಲಿ ವರ್ಷದ ಆರಂಭದಲ್ಲೇ ಹಂದಿ ಜ್ವರ ಮರಣ ಮೃದಂಗ ಬಾರಿಸುತ್ತಿದೆ. ಎರಡು ತಿಂಗಳಲ್ಲಿ 607 ಪ್ರಕರಣ ವರದಿಯಾಗಿದ್ದು, ಫೆಬ್ರವರಿ ತಿಂಗಳ 28 ದಿನದಲ್ಲೇ 400 ಪ್ರಕರಣಗಳು ದೃಢಪಟ್ಟಿವೆ. ರಾಜ್ಯ ಡೆತ್‌ ಆಡಿಟ್‌ ಕಮಿಟಿ ವರದಿ ಪ್ರಕಾರ ಈ ಪೈಕಿ 14 ಮಂದಿ ಮೃತಪಟ್ಟಿದ್ದಾರೆ.


ಇದರಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ 141 ಪ್ರಕರಣ ವರದಿಯಾಗಿದ್ದು, ಬಿಬಿಎಂಪಿ ಹೊರತುಪಡಿಸಿ ಬೆಂಗಳೂರು ನಗರ ಭಾಗದಲ್ಲಿ 50 ಪ್ರಕರಣ ದೃಢಪಟ್ಟಿದೆ.


ಜನವರಿ ಕೊನೆಯ ವಾರದಲ್ಲಿ 49ರಷ್ಟಿದ್ದ ಪ್ರಕರಣಕ್ಕೆ ಫೆಬ್ರವರಿ ಕೊನೆಯ ವಾರದ ವೇಳೆಗೆ 91 ಪ್ರಕರಣ ಹೆಚ್ಚುವರಿಯಾಗಿ ಸೇರ್ಪಡೆಗೊಂಡಿದೆ. ರಾಜ್ಯಾದ್ಯಂತ ಪ್ರಕರಣಗಳು ಹಠಾತ್‌ ಹೆಚ್ಚಳ ಕಂಡಿರುವುದರಿಂದ ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.


ಸಾಂಕ್ರಾಮಿಕ ರೋಗಗಳ ವಿಭಾಗದ ಜಂಟಿ ನಿರ್ದೇಶಕರಾದ ಎಸ್‌. ಸಜ್ಜನ್‌ ಶೆಟ್ಟಿ ಪ್ರಕಾರ, ರಾಜ್ಯದಲ್ಲಿ ಎಚ್‌1ಎನ್‌1 ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಎಲ್ಲಾ ಜಿಲ್ಲಾ ಆರೋಗ್ಯಾಧಿಕಾರಿಗಳು ಅಗತ್ಯ ಕ್ರಮ ಕೈಗೊಂಡಿದ್ದಾರೆ. ಪ್ರಕರಣಗಳ ಸಂಖ್ಯೆ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಕಾಯಿಲೆಯನ್ನು ಶೀಘ್ರ ಪತ್ತೆ ಹಚ್ಚಿದರೆ ಗುಣಪಡಿಸಬಹುದು. ಆದರೂ ಮುನ್ನೆಚ್ಚರಿಕೆ ವಹಿಸುವಂತೆ ಶುಕ್ರವಾರ ಎಲ್ಲಾ ಜಿಲ್ಲಾ ಆರೋಗ್ಯಾಧಿಕಾರಿಗಳಿಗೂ ಸುತ್ತೋಲೆ ರವಾನಿಸಲಾಗಿದೆ ಎಂದು ಹೇಳಿದರು.


ಕಟ್ಟೆಚ್ಚರಕ್ಕೆ ಸೂಚನೆ:

ಕಳೆದ ಎರಡು ಡೆತ್‌ ಆಡಿಟ್‌ ಸಮಿತಿ ಸಭೆಯಲ್ಲೂ ಎಚ್‌1ಎನ್‌1 ಮರಣ ಸಂಖ್ಯೆಯ ಹೆಚ್ಚಾಗುತ್ತಿರುವುದು ದೃಢಪಟ್ಟಿದೆ. ಹೀಗಾಗಿ ಇಲಾಖೆಯು ಕೂಡಲೇ ಕಟ್ಟೆಚ್ಚರ ವಹಿಸುವಂತೆ ಆದೇಶ ಮಾಡಿದೆ. ಸೋಂಕಿನ ಲಕ್ಷಣ ಕಂಡುಬಂದ ಕೂಡಲೇ ಕಾಯಿಲೆ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು. ಕಾಯಿಲೆಗೆ ಸೂಕ್ತ ಚಿಕಿತ್ಸಾ ವ್ಯವಸ್ಥೆ ಕಲ್ಪಿಸಬೇಕು ಎಂದು ಆದೇಶ ನೀಡಲಾಗಿದೆ.


ಕಾಯಿಲೆಗಳು ತೀವ್ರವಾಗಿ ಹರಡುತ್ತಿರುವ ಪ್ರದೇಶದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಜಾಗೃತಿ ಮೂಡಿಸಬೇಕು. ರೋಗದ ಬಗ್ಗೆ ಅರಿವು ಮೂಡಿಸುವ ಶಿಬಿರಗಳನ್ನು ಏರ್ಪಡಿಸಬೇಕು. ರೋಗ ಲಕ್ಷಣಗಳು ಕಂಡು ಬಂದವರನ್ನು ಕೂಡಲೇ ಪರೀಕ್ಷೆಗೆ ಒಳಪಡಿಸಿ ಚಿಕಿತ್ಸೆ ಕೊಡಿಸಬೇಕು. ಈ ಬಗ್ಗೆ ಕಾಲಕಾಲಕ್ಕೆ ವರದಿ ನೀಡಬೇಕು ಎಂದು ಆರೋಗ್ಯ ಇಲಾಖೆ ಆದೇಶಿಸಿದೆ.


ಸರ್ಕಾರದಿಂದ ಎಚ್‌1ಎನ್‌1 ಜಾಗೃತಿ


ಎಚ್‌1ಎನ್‌1 ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕ ಸ್ಥಳಗಳು, ಮೆಟ್ರೋ ನಿಲ್ದಾಣಗಳು, ಪ್ರಾಥಮಿಕ, ತಾಲೂಕು, ಜಿಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಎಚ್‌1ಎನ್‌1 ಬಗ್ಗೆ ಜಾಗೃತಿ ಮೂಡಿಸುವ ಸಂದೇಶ ನೀಡಲಾಗುತ್ತಿದೆ. ಪ್ರತಿಯೊಬ್ಬ ಶಂಕಿತರಿಗೂ ಸೂಕ್ತ ಚಿಕಿತ್ಸೆ ಒದಗಿಸಬೇಕು ಎಂದು ಸೂಚಿಸಲಾಗಿದೆ ಎಂದು ಆರೋಗ್ಯ ಇಲಾಖೆ ಸಾಂಕ್ರಾಮಿಕ ರೋಗಗಳ ನಿಯಂತ್ರಣಾ ಕಾರ್ಯಕ್ರಮದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಈಗಾಗಲೇ ಎಲ್ಲಾ ಜಿಲ್ಲೆಗಳ ಜಿಲ್ಲಾ ಆರೋಗ್ಯಾಧಿಕಾರಿಗಳು ಸುದ್ದಿಗೋಷ್ಠಿ ನಡೆಸಿ ಎಚ್‌1ಎನ್‌1 ಹೆಚ್ಚಾಗುತ್ತಿರುವ ಬಗ್ಗೆ ಕಟ್ಟೆಚ್ಚರ ವಹಿಸಲು ಸೂಚಿಸಿದ್ದಾರೆ. ಜತೆಗೆ ಎಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ನಮ್ಮ ಸುದ್ಧಿ ವೀಕ್ಷಿಸಲು ಲಿಂಕ್ ಬಳಸಿ https://youtu.be/jWz-MKDOEW4