Sunday, December 30, 2018

ಮೋದಿಗೆ ತಿರುಗೇಟು

ಜನಜಾಗೃತಿ ಸುದ್ಧಿವಾಹಿನಿ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಸಾಲಮನ್ನಾ ಕುರಿತು ದಾರಿ ತಪ್ಪಿಸುವ ಹೇಳಿಕೆ ನೀಡುತ್ತಿರುವುದು ದೌರ್ಭಾಗ್ಯ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಕರ್ನಾಟಕ ರಾಜ್ಯದ ರೈತರ ಸಾಲಮನ್ನಾ ಕುರಿತು ಪ್ರಧಾನ ಮಂತ್ರಿಯವರ ಹೇಳಿಕೆ ರಾಜ್ಯದ ರೈತರೂ ಸೇರಿ ಇಡೀ ದೇಶದ ಜನರ ದಾರಿ ತಪ್ಪಿಸುವಂತಿದೆ. ಇಂತಹ ಹೇಳಿಕೆ ಅತ್ಯಂತ ದುರದೃಷ್ಟಕರ ಹಾಗೂ ದೇಶದ ದೌರ್ಭಾಗ್ಯ ಎಂದು ಸಿಎಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿಗಳ ಕಚೇರಿ ಪತ್ರಿಕಾ ಪ್ರಕಟಣೆ ಹೊರಡಿಸಿದೆ. ಕರ್ನಾಟಕ ಸರ್ಕಾರ ಸಾರ್ವಜನಿಕರ ಮತ್ತು ತೆರಿಗೆದಾರರ ಹಣ ಪೋಲಾಗದಂತೆ, ಅತಿ ಎಚ್ಚರಿಕೆಯಿಂದ ಈ ಯೋಜನೆಯನ್ನು ಜಾರಿಗೊಳಿಸಿ ಅರ್ಹ ರೈತರಿಗೆ ಹಣ ಸೇರುವಂತೆ ಮಾಡುತ್ತಿದೆ. ಪ್ರತಿಯೊಬ್ಬ ಅರ್ಹ ರೈತನಿಗೆ ಈ ಯೋಜನೆಯ ಲಾಭ ದೊರೆಯುತ್ತದೆ ಎನ್ನುವುದಕ್ಕೆ ಖಾತ್ರಿ ಇದೆ.

ರಾಜ್ಯದಲ್ಲಿ ಜಾರಿಗೆ ತಂದಿರುವ ಈ ವಿನೂತನ ಮಾದರಿಯನ್ನು ಅಳವಡಿಸಿಕೊಳ್ಳುವ ಬಗ್ಗೆ ಇತರ ರಾಜ್ಯಗಳೂ ಮುಂದೆ ಬಂದಿವೆ. ಆಧಾರ್‌ ಮತ್ತು ಭೂ ದಾಖಲಾತಿಗಳ ಡಿಜಿಟಲ್‌ ದೃಢೀಕರಣ ಮತ್ತು ಪಡಿತರ ಚೀಟಿ ಇವುಗಳಿಂದ ಕೂಡಿರುವ ಮನ್ನಾ ಪ್ರಕ್ರಿಯೆ ವ್ಯವಸ್ಥೆಯು ಅತ್ಯಂತ ಸುರಕ್ಷಿತ ಮತ್ತು ದುರುಪಯೋಗಕ್ಕೆ ಆಸ್ಪದ ನೀಡುವುದಿಲ್ಲ. ಅರ್ಹ ರೈತರ ಖಾತೆಗೆ ಹಣ ಜಮೆಗೊಳ್ಳುತ್ತದೆ ಎಂದು ಸಿಎಂ ಹೇಳಿದ್ದಾರೆ.

60 ಸಾವಿರ ರೈತರಿಗೆ ಪ್ರಯೋಜನ

ಈವರೆಗೆ ಸುಮಾರು 60 ಸಾವಿರ ರೈತರ 350 ಕೋಟಿ ರೂ. ಸಾಲ ಮನ್ನಾದ ಮೊತ್ತವನ್ನು ನೇರವಾಗಿ ಅವರ ಖಾತೆಗೆ ಜಮೆ ಮಾಡಲಾಗಿದೆ. ಮುಂದಿನ ವಾರದಲ್ಲಿ ಇನ್ನೂ 1 ಲಕ್ಷ ರೈತರಿಗೆ 400 ಕೋಟಿ ರೂ.ಗಳನ್ನು ಜಮೆ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.

ವಾಣಿಜ್ಯ ಬ್ಯಾಂಕುಗಳಲ್ಲಿ ಬೆಳೆ ಸಾಲ ಪಡೆದ ಸುಮಾರು 21 ಲಕ್ಷ ರೈತರಲ್ಲಿ ಕೇವಲ 10 ದಿನಗಳಲ್ಲಿ 8.5 ಲಕ್ಷ ರೈತರು ತಮ್ಮ ಆಧಾರ್‌, ರೇಷನ್‌ ಕಾರ್ಡ್‌ ಹಾಗೂ ಪಹಣಿಯ ಮಾಹಿತಿಗಳನ್ನು ಒದಗಿಸಿದ್ದಾರೆ. ಈ ಪ್ರಕ್ರಿಯೆ 2019ರ ಜನವರಿ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ. ಈ ಅವಧಿಯೊಳಗೆ ಎಲ್ಲ ಅರ್ಹ ರೈತರನ್ನು ನೋಂದಾಯಿಸಲಾಗುವುದು. ವಾಸ್ತವ ಅಂಶಗಳು ಕಣ್ಣು ಮುಂದೆಯೇ ಇವೆ. ಹೀಗಿದ್ದರೂ ಪ್ರಧಾನಿ ಹುದ್ದೆಯಲ್ಲಿರುವವರು ಜವಾಬ್ದಾರಿ ಮರೆತು ಇಂತಹ ಹೇಳಿಕೆ ನೀಡಿದ್ದು ಸರಿಯಲ್ಲ ಎಂದು ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.

ನಮ್ಮ ಚಾನಲ್ ಗೆ ಭೇಟಿ ನೀಡಿ subscribe ಮಾಡಿ Youtube.com/c/janajagrutiTVNews

ಫೇಸ್ಬುಕ್ ನಲ್ಲಿ ಬೆಂಬಲಿಸಲು ಕ್ಲಿಕ್ ಮಾಡಿ https://www.facebook.com/%E0%B2%9C%E0%B2%A8%E0%B2%9C%E0%B2%BE%E0%B2%97%E0%B3%83%E0%B2%A4%E0%B2%BF-%E0%B2%B8%E0%B3%81%E0%B2%A6%E0%B3%8D%E0%B2%A7%E0%B2%BF%E0%B2%B5%E0%B2%BE%E0%B2%B9%E0%B2%BF%E0%B2%A8%E0%B2%BF-474624809612940/

No comments:

Post a Comment