ಜನಜಾಗೃತಿ ಸುದ್ಧಿವಾಹಿನಿ
ಬೆಂಗಳೂರ್ : ,ಡಿ.29- ಕರ್ತವ್ಯ ಪರತೆ, ಮಾನವೀಯತೆ, ಸಾಮಾಜಿಕ ಕಳಕಳಿಯುಳ್ಳವರಾಗಿದ್ದ ಖಡಕ್ ಪೊಲೀಸ್ ಅಧಿಕಾರಿ ಮಧುಕರ ಶೆಟ್ಟಿ ಇದೀಗ ನೆನಪು ಮಾತ್ರ.. ಕರ್ನಾಟಕ ರಾಜ್ಯದಲ್ಲಿ ತಾಂಡವವಾಡುತ್ತಿದ್ದ ಭ್ರಷ್ಟಾಚಾರವನ್ನು ಮತ್ತು ಭ್ರಷ್ಟರನ್ನು ಬೇಟೆಯಾಡುತ್ತಿದ್ದ ಲೋಕಾಯುಕ್ತ ಸಂಸ್ಥೆಯಲ್ಲಿ ಖಡಕ್ ಅಧಿಕಾರಿ ಎಂದೇ ಮಧುಕರ್ ಶೆಟ್ಟಿ ಜನ ಜನಿತರು.
ಲೋಕಾಯುಕ್ತ ಎಸ್ಪಿಯಾಗಿ ನೇಮಕಗೊಂಡ ಎರಡೇ ತಿಂಗಳಿಗೆ ಎರಡು ಜಿಲ್ಲೆಗಳ ಎಸ್ಪಿಗಳನ್ನು ಟ್ರ್ಯಾಪ್ ಮಾಡಿ ಲಂಚ ಪಡೆಯುವಾಗ ಬಂಧಿಸಿ ಜೈಲಿಗಟ್ಟುವ ಮೂಲಕ ಲೋಕಾಯುಕ್ತದಲ್ಲೂ ಭ್ರಷ್ಟಾಚಾರವಿದೆ ಎಂದು ತೋರಿಸಿಕೊಟ್ಟ ದಿಟ್ಟ ಅಧಿಕಾರಿ ಮಧುಕರ ಶೆಟ್ಟಿ.
ಗಣಿ ಹಗರಣ, ಬೆಂಗಳೂರು ವಿಮಾನ ನಿಲ್ದಾಣದ ಬಳಿಯ ಭೂಕಬಳಿಕೆ ಸೇರಿದಂತೆ ಅನೇಕ ಪ್ರಕರಣಗಳಲ್ಲಿ ಯಾರ ಮುಲಾಜಿಗೂ ಒಳಗಾಗದೆ ವಿಚಾರಣೆ ನಡೆಸಿ ತಪ್ತಿತಸ್ಥರು ಎಷ್ಟೇ ಪ್ರಭಾವಿಯಾಗಿದ್ದರೂ ಜೈಲಿಗಟ್ಟದೇ ಬಿಡುತ್ತಿರಲಿಲ್ಲ. ಹಗಲು ರಾತ್ರಿಯೆನ್ನದೇ ದುಡಿಯುತ್ತಿದ್ದ ಮಧುಕರ ಶೆಟ್ಟಿಯವರು ದಕ್ಷ, ಕಾಯಕ ನಿಷ್ಠ ಅಧಿಕಾರಿ.
ಖ್ಯಾತ ಪತ್ರಕರ್ತ ದಿವಂಗತ ವಡ್ಡರ್ಸೆ ರಘುರಾಮ್ ಶೆಟ್ಟಿ ಅವರ ಪುತ್ರ ,1999ರ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿರುವ ಮಧುಕರ್ ಶೆಟ್ಟಿ, ಕರ್ನಾಟಕದ ಉಡುಪಿ ಜಿಲ್ಲೆಯವರು.ಅವರು ಹೊಸದಿಲ್ಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಿಂದ ಸಮಾಜಶಾಸ್ತ್ರದಲ್ಲಿ ಎಂ.ಎ. ಮತ್ತು ನ್ಯೂಯಾರ್ಕ್ ನ ಯೂನಿವರ್ಸಿಟಿಯಲ್ಲಿ ಪಿ.ಎಚ್.ಡಿ ಪದವಿ ಪಡೆದಿದ್ದರು. ಚಿಕ್ಕಮಗಳೂರು ಎಸ್ಪಿಯಾಗಿ, ಲೋಕಾಯುಕ್ತ ಎಸ್ಪಿಯಾಗಿ ಅವರು ಖಡಕ್ ಹಾಗೂ ಜನಪರ ಅಧಿಕಾರಿಯಾಗಿ ಖ್ಯಾತಿ ಗಳಿಸಿದ್ದರು. ಚಾಮರಾಜನಗರ ಎಸ್ಪಿಯಾಗಿದ್ದ ವೇಲೆ ಮಾರು ವೇಷದಲ್ಲಿ ಕಾರ್ಯಾಚರಣೆ ನಡೆಸಿ ಲಂಚಕೋರ ಪೊಲೀಸರಿಗೇ ಬಿಸಿ ಮುಟ್ಟಿಸಿದ್ದರು.
ದಕ್ಷ ಅಧಿಕಾರಿಯ ಹೆಜ್ಜೆ ಗುರುತು:
ಈ ಹಿಂದೆ ಚಿಕ್ಕಮಗಳೂರು ಎಸ್ಪಿಯಾಗಿ ಸೇವೆ ಸಲ್ಲಿಸುತ್ತಿದ್ದ ವೇಳೆ, ಡಿಸಿ ಹರ್ಷ ಗುಪ್ತ ಜತೆಗೂಡಿ ದಲಿತ ಸಮುದಾಯದ ಬೆನ್ನೆಲುಬಾಗಿ ನಿಂತಿದ್ದರು. ದಲಿತರ ಭೂಮಿಯನ್ನು ಅಕ್ರಮವಾಗಿ ವಶಪಡಿಸಿಕೊಂಡಿದ್ದ ವ್ಯಕ್ತಿಗಳಿಂದ ಜಮೀನು ಬಿಡಿಸಿ ದಲಿತರಿಗೆ ನೀಡಿದ್ದರು. ನಂತರ ಆ ಹಳ್ಳಿಯ ಹೆಸರನ್ನು ಗುಪ್ತಶೆಟ್ಟಿ ಹಳ್ಳಿ ಎಂದು ನಾಮಕರಣ ಮಾಡಲಾಗಿತ್ತು. ಈಗಲೂ ಆ ಹಳ್ಳಿಯಲ್ಲಿರುವ ನೂರಾರು ಮಂದಿ ಮಧುಕರ್ ಶೆಟ್ಟಿ ಅವರು ಮಾಡಿದ ಕೆಲಸವನ್ನು ನೆನೆಯುತ್ತಾರೆ.
ಉನ್ನತ ವಿದ್ಯಾಭ್ಯಾಸದ ರಜೆಯ ಮೇಲೆ ಮಧುಕರ್ ಶೆಟ್ಟಿ 2011ರಲ್ಲಿ ತೆರಳಿದ್ದರು. ಅದಾಗಿ ಬರೋಬ್ಬರಿ ಐದು ವರ್ಷಗಳ ಕಾಲ ಮಧುಕರ್ ಶೆಟ್ಟಿ ಅಮೆರಿಕಾದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ನಂತರ ಐಜಿಪಿಯಾಗಿ ಬಡ್ತಿ ಪಡೆದ ಅವರು ಕೆಲ ಕಾಲ ಪೊಲೀಸ್ ನೇಮಕಾತಿ ವಿಭಾಗದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದರು. ಅದಾದ ಕೆಲವೇ ದಿನಗಳಲ್ಲಿ ಕೇಂದ್ರ ಸೇವೆಗೆ ತೆರಳಿದ ಅವರು ಸರ್ದಾರ್ ವಲ್ಲಭಭಾಯ್ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ಉಪ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಧುಕರ್ ಶೆಟ್ಟಿ ಸಾಮಾಜಿಕ ಕಳಕಳಿ ಹೊಂದಿರುವ ಅಧಿಕಾರಿ ಎಂಬ ಹೆಸರನ್ನ ಜನಸಾಮಾನ್ಯರಿಂದ ಗಳಿಸಿರುವ ಅಧಿಕಾರಿ.
ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆ ಬರೆಯುವ ಮುನ್ನ ಅವರು ದೆಹಲಿಯ ಜವಹರಲಾಲ್ ವಿಶ್ವವಿದ್ಯಾಲಯದಲ್ಲಿ (ಜೆಎನ್ಯು) ಸಮಾಜ ಶಾಸ್ತ್ರದಲ್ಲಿ ಎಂಎ ಮಾಡಿದ್ದರು. ನೇರ ನಡೆ, ನಿಷ್ಠುರ ಮಾತಿನ, ಮಾನವೀಯ ಗುಣವುಳ್ಳ ಮಧುಕರ ಶೆಟ್ಟಿಯವರು ಎಂದಿಗೂ ಕರ್ತವ್ಯದ ವಿಚಾರದಲ್ಲಿ ರಾಜೀ ಮಾಡಿಕೊಂಡವರಲ್ಲ. ಕಾನೂನು ಚೌಕಟ್ಟಿನಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದ ಮಧುಕರ ಶೆಟ್ಟಿಯವರು ಭ್ರಷ್ಟರ ಪಾಲಿಗೆ ಸಿಂಹ ಸ್ವಪ್ನರಾಗಿದ್ದರು.
ತಪ್ಪನ್ನು ಯಾರೇ ಮಾಡಲಿ ಅದನ್ನು ಯಾವ ಮುಲಾಜು ಇಲ್ಲದೇ ಖಂಡಿಸುತ್ತಿದ್ದ ಅವರು, ಹಿರಿಯ ಅಧಿಕಾರಿಗಳಿಗೆ ವಿಧೇಯರಾಗಿ, ಕಿರಿಯ ಅಧಿಕಾರಿಗಳಿಗೆ ಉತ್ತಮ ಮಾರ್ಗದರ್ಶಕರಾಗಿದ್ದರು. ತಂದೆ ವಡ್ಡರ್ಸೆ ರಘುರಾಮ ಶೆಟ್ಟರಂತೆಯೇ ಉತ್ತಮ ಸಮಾಜದ ಕನಸು ಕಂಡಿದ್ದ ಮಧುಕರ ಶೆಟ್ಟಿಯವರ ಅಗಲಿಕೆ ಕರ್ನಾಟಕ ಪೊಲೀಸ್ ಇಲಾಖೆಗೆ ತುಂಬಲಾರದ ನಷ್ಟ. ಅಂತೆಯೇ ಇಡೀ ಕರ್ನಾಟಕದ ಜನತೆಯೂ ಮಧುಕರ ಶೆಟ್ಟಿಯವರ ಜನಪರ ಕಾರ್ಯಗಳನ್ನು ನೆನೆಯುತ್ತಿರುವುದು ಅವರ ಜನಪ್ರಿಯತೆಯನ್ನು ಸಾಕ್ಷೀಕರಿಸಿದೆ.
visit our channel by link Youtube.com/c/janajagrutiTVNews
No comments:
Post a Comment