Tuesday, February 12, 2019

⭕ಫೇಸ್‌ಬುಕ್‌ ಗೆಳತಿಯರ ಕಾಟ :ಜೇವರ್ಗಿ ವಿದ್ಯಾರ್ಥಿ ಸಾವು❗

ಜನಜಾಗೃತಿ ಸುದ್ಧಿವಾಹಿನಿ

ಬೆಂಗಳೂರು: ಫೇಸ್‌ಬುಕ್‌ ಗೆಳತಿಯರ ಕಾಟ ತಾಳಲಾರದೆ ಖಾಸಗಿ ಕಾಲೇಜಿನ ಎಂಜಿನಿಯರಿಂಗ್‌ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಾರತ್‌ಹಳ್ಳಿ ಸಮೀಪದ ಕರಿಯಮ್ಮನ ಅಗ್ರಹಾರದ ಪಿಜಿಯಲ್ಲಿ ನಡೆದಿದೆ.


ಕಲಬುರ್ಗಿ ಜಿಲ್ಲೆ ಜೇವರ್ಗಿ ತಾಲೂಕಿನ ಅತೀಶ್‌ ಎಸ್‌.ನಾಯಕ್‌ (19) ಮೃತ ದುರ್ದೈವಿ. ಶನಿವಾರ ಬೆಳಗ್ಗೆ ಕಾಲೇಜಿಗೆ ತೆರಳದೆ ಪಿಜಿಯಲ್ಲಿದ್ದ ಅತೀಶ್‌ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮಧ್ಯಾಹ್ನ ಮೃತನ ಸಹಪಾಠಿಗಳು ಪಿಜಿಗೆ ಮರಳಿದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.


ಫೇಸ್‌ಬುಕ್‌ ಗೆಳತಿಯರಿಗೆ ತಲಾಶ್‌: ಮೃತ ಅತೀಶ್‌, ಮಾರತ್‌ಹಳ್ಳಿ ಹತ್ತಿರದ ಖಾಸಗಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಸಿವಿಲ್‌ ಎಂಜಿನಿಯರಿಂಗ್‌ ವಿಭಾಗದಲ್ಲಿ ಪ್ರಥಮ ವರ್ಷದ ವ್ಯಾಸಂಗ ಮಾಡುತ್ತಿದ್ದ.


ಕಾಲೇಜು ಸಮೀಪದ ಗೋಪಾಲರೆಡ್ಡಿ ಎಂಬುವರಿಗೆ ಸೇರಿದ ಪಿಜಿಯಲ್ಲಿ ಆತ ನೆಲೆಸಿದ್ದ. ಕಾಲೇಜಿನಲ್ಲಿ ಸಭ್ಯ ವಿದ್ಯಾರ್ಥಿಯಾಗಿದ್ದ ಎಂದು ಮೃತನ ಉಪನ್ಯಾಸಕರು ಹಾಗೂ ಸಹಪಾಠಿಗಳು ಹೇಳಿಕೆ ನೀಡಿದ್ದಾರೆ. ಇತ್ತೀಚಿಗೆ ಅತೀಶ್‌ ವಿಪರೀತವಾಗಿ ಮೊಬೈಲ್‌ ಬಳಸುತ್ತಿದ್ದು, ಸದಾ ಸಾಮಾಜಿಕ ಜಾಲ ತಾಣಗಳಲ್ಲಿ ಸಕ್ರಿಯವಾಗಿದ್ದ ಸಂಗತಿ ಗೊತ್ತಾಗಿದೆ ಎಂದು ಪೊಲೀಸರು ಹೇಳಿದ್ದಾರೆ.


ಶುಕ್ರವಾರ ಸಹಪಾಠಿಗಳು ಕಾಲೇಜಿಗೆ ತೆರಳಿದ ಬಳಿಕ ಅತೀಶ್‌ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮಧ್ಯಾಹ್ನ ಕಾಲೇಜಿನಿಂದ ಮರಳಿದ ಮೃತನ ಗೆಳೆಯರು, ಕೊಠಡಿಗೆ ಬಾಗಿಲು ಬಡಿದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದರಿಂದ ಆತಂಕಗೊಂಡ ಅವರು ಕೂಡಲೇ ಪಿಜಿ ಮಾಲಿಕರಿಗೆ ವಿಷಯ ತಿಳಿಸಿದ್ದರು. ಆನಂತರ ಕೊಠಡಿ ಬಾಗಿಲು ಒಡೆದು ಒಳ ಪ್ರವೇಶಿಸಿದ ನೇಣಿನ ಕುಣಿಕೆಯಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.


ಕೆಲ ದಿನಗಳ ಹಿಂದೆ ಫೇಸ್‌ಬುಕ್‌ನಲ್ಲಿ ಆತನಿಗೆ ಸೋನಿಯಾ ಹಾಗೂ ಪ್ರಕೃತಿ ಎಂಬ ಹೆಸರಿನ ಯುವತಿಯರು ಪರಿಚಯವಾಗಿತ್ತು. ಬಳಿಕ ಅವರು ನಡುವೆ ಮೊಬೈಲ್‌ ಸಂಖ್ಯೆ ವಿನಿಮಯವಾಗಿ ಮಾತುಕತೆ ಶುರುವಾಗಿತ್ತು. ನಡು ರಾತ್ರಿವರೆಗೆ ಫೇಸ್‌ಬುಕ್‌ ಗೆಳೆಯತಿಯರ ಜತೆ ಅತೀಶ್‌ನ ಮೊಬೈಲ್‌ ಸಂಭಾಷಣೆ ಹಾಗೂ ಚಾಟಿಂಗ್‌ ನಡೆದಿವೆ. ಆದರೆ ಆ ಗೆಳೆತಿಯರನ್ನು ಆತ ಭೇಟಿಯಾಗಿದ್ದ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಹೀಗಾಗಿ ಸಿಡಿಆರ್‌ (ಮೊಬೈಲ್‌ ಕರೆಗಳ) ಅನ್ನು ಪರಿಶೀಲಿಸಿ ಮೃತನ ಅದೃಶ್ಯ ಸ್ನೇಹಿತೆಯರನ್ನು ವಿಚಾರಣೆ ಕರೆಯಲಾಗುತ್ತದೆ.


ಹಲವು ದಿನಗಳ ಹಿಂದೆಯೇ ಸೋನಿಯಾ ಹಾಗೂ ಪ್ರಕೃತ ಎಂಬ ಹುಡುಗಿಯರು ಹಿಂಸೆ ಕೊಡುತ್ತಿದ್ದಾರೆ. ದುಡ್ಡು ಕೊಡುವಂತೆ ಪೀಡಿಸುತ್ತಿದ್ದಾರೆ ಎಂದು ಪುತ್ರ ಹೇಳಿಕೊಂಡಿದ್ದ. ಆತನ ಸಾವಿಗೆ ಆ ಹುಡುಗಿಯರೇ ಕಾರಣವಾಗಿದ್ದಾರೆ ಎಂದು ಮೃತನ ಪೋಷಕರು ದೂರು ಕೊಟ್ಟಿದ್ದಾರೆ. ಅದರನ್ವಯ ದೂರಿನ ಮೇರೆಗೆ ಆತ್ಮಹತ್ಯೆಗೆ ಪ್ರಚೋದನೆ (ಐಪಿಸಿ 306)ರಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಮಾರತ್‌ಹಳ್ಳಿ ಠಾಣೆ ಪೊಲೀಸರು ಮಾಹಿತಿ ನೀಡಿದ್ದಾರೆ.

ನಮ್ಮ ಸುದ್ಧಿ ವೀಕ್ಷಿಸಲು ಲಿಂಕ್ ಬಳಸಿ https://youtu.be/EkNJBR144Q8

No comments:

Post a Comment