Tuesday, January 15, 2019

ಶಬರಿಮಲೆ ವಿವಾದ: ಮೌನ ಮುರಿದ ಪ್ರಧಾನಿ ಮೋದಿ ಹೇಳಿದ್ದೇನು?

ಜನಜಾಗೃತಿ ಸುದ್ಧಿವಾಹಿನಿ


     16 jan 2019

ಕೊಲ್ಲಂ: ಶಬರಿಮಲೆ ಅಯ್ಯಪ್ಪ ದರ್ಶನಕ್ಕೆ ಎಲ್ಲ ವಯೋಮಾನದ ಮಹಿಳೆಯರಿಗೆ ಅವಕಾಶ ನೀಡುವ ಐತಿಹಾಸಿಕ ತೀರ್ಪನ್ನು ಸುಪ್ರೀಂಕೋರ್ಟ್ ನೀಡಿದ ಬಳಿಕ ಇದೇ ಮೊದಲ ಬಾರಿಗೆ ಶಬರಿಮಲೆ ವಿವಾದದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೌನ ಮುರಿದಿದ್ದಾರೆ.

ಕೊಲ್ಲಂನಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಮೋದಿ, "ಶಬರಿಮಲೆ ವಿವಾದಕ್ಕೆ ಸಂಬಂಧಿಸಿದಂತೆ ಕೇರಳ ಸರ್ಕಾರದ ನಿಲುವು ನಾಚಿಕೆಗೇಡು. ಈ ವಿವಾದ ಕುರಿತ ಎಲ್‌ಡಿಎಫ್ ನಿರ್ಧಾರ ಯಾವುದೇ ಪಕ್ಷ ಅಥವಾ ಸರ್ಕಾರದ ಅತ್ಯಂತ ನಾಚಿಕೆಗೇಡಿನ ನಡವಳಿಕೆ ಎಂದು ಇತಿಹಾಸದಲ್ಲಿ ದಾಖಲಿಸಲ್ಪಡುತ್ತದೆ" ಎಂದು ಹೇಳಿದರು.

ತ್ರಿಪುರಾದಲ್ಲಿ ಸಂಭವಿಸಿದ ರಾಜಕೀಯ ಬದಲಾವಣೆಯ ಸೂಚನೆ ಕೇರಳದಲ್ಲೂ ಕಂಡುಬರುತ್ತಿದ್ದು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಎರಡು ಧ್ರುವಗಳ ರಾಜಕೀಯ ಅಧಿಪತ್ಯ ಮುಕ್ತಾಯವಾಗಲಿದ್ದು, ಬಿಜೆಪಿ ಹಾಗೂ ಎನ್‌ಡಿಎ ಮೈತ್ರಿಕೂಟ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.


ಎಲ್‌ಡಿಎಫ್ ಹಾಗೂ ಯುಡಿಎಫ್ ಒಂದೇ ನಾಣ್ಯದ ಎರಡು ಮುಖಗಳು ಎಂದು ಮೋದಿ ಟೀಕಿಸಿದರು.

ಇದಕ್ಕೂ ಮುನ್ನ ಮೋದಿ ತಿರುವನಂತಪುರದಲ್ಲಿ 13 ಕಿಲೋಮೀಟರ್ ಉದ್ದದ ಕೊಲ್ಲಂ ಬೈಪಾಸ್ ಉದ್ಘಾಟಿಸಿದರು. ಕಾಂಗ್ರೆಸ್ ಮೇಲೂ ವಾಗ್ದಾಳಿ ನಡೆಸಿದ ಅವರು, "ಯುಡಿಎಫ್ ಉತ್ತಮವೇನೂ ಅಲ್ಲ. ಕಾಂಗ್ರೆಸ್ ಪಕ್ಷ ಬಹು ನಿಲುವು ಹೊಂದಿದೆ. ಸಂಸತ್ತಿನಲ್ಲಿ ಒಂದು ಹೇಳುತ್ತಾರೆ; ಪಟ್ಟಣಂತಿಟ್ಟದಲ್ಲಿ ಮತ್ತೊಂದು ಹೇಳುತ್ತಾರೆ. ಸೋಮವಾರ ಒಂದು ಹೇಳಿದರೆ ಮರುದಿನ ಇನ್ನೊಂದು ಹೇಳುತ್ತಾರೆ" ಎಂದು ಟೀಕಿಸಿದರು.ಮೋದಿ ಹೇಳಿಕೆಯನ್ನು ಸಿಪಿಎಂ ಕಟುವಾಗಿ ಟೀಕಿಸಿದ್ದು, ಸುಪ್ರೀಂಕೋರ್ಟ್ ತೀರ್ಪು ಅನುಷ್ಠಾನಗೊಳಿಸಿದ್ದಕ್ಕೆ ದೇಶದ ಪ್ರಧಾನಿ ಹೀಗೆ ಹೇಳಿರುವುದು ನಿಜಕ್ಕೂ ನಾಚಿಕೆಗೇಡು ಎಂದು ತಿರುಗೇಟು ನೀಡಿದೆ.

ನಮ್ಮ ಸುದ್ಧಿ ಗಳನ್ನ ವೀಕ್ಷಿಸಲು ಕ್ಲಿಕ್ ಮಾಡಿ https://youtu.be/ujlXO-HUsaM

No comments:

Post a Comment